ಮಂಗಳವಾರ, ಜುಲೈ 31, 2012

ಕು೦ದಾದ್ರಿ ಕೈಬೀಸಿ ಕರೆಯುತಿದೆ...........



ಮಂಜು ಮುಸುಕಿದ ಬೆಟ್ಟಗಳ ಸಾಲುಗಳ ಮಧ್ಯೆ ,ಕಡಿದಾದ ತಿರುವುಗಳಲ್ಲಿ,ನಾವು ಚಲಿಸುತ್ತಿದ್ದೆವು.ಇಲ್ಲಿ ವಾಹನ ಚಾಲಕರು ,ವಾಹನ ಚಲಾಯಿಸುವಾಗ ಸ್ವಲ್ಪಗಮನ ತಪ್ಪಿದರೂ  ಸಾವಿರಾರು ಅಡಿಗಳ ಕೆಳಕ್ಕೆ ಬೀಳುವುದ0ತೂ  ಸತ್ಯ.............ಆಬ್ಬಬ್ಬಾ!!!!  ಆ ಹಾದಿಯಲ್ಲಿ ಪ್ರಯಾಣ ಮಾಡುವುದೇ ಒಂದು ಹೊಸ ಅನುಭವ.


ಇದು ಎಲ್ಲಪ್ಪಾ  .....ಎಂದುಕೊಳ್ಳುತ್ತಿದ್ದೀರಾ?ಅದೇ ಕುಂದಾದ್ರಿ ಬೆಟ್ಟ.ಕುಂದಾದ್ರಿ ಬೆಟ್ಟವು ಶಿವಮೊಗ್ಗ ಜಿಲ್ಲೆ ,ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ.ತೀರ್ಥಹಳ್ಳಿಯಿಂದ ಆಗು0ಬೆ ಹೋಗುವಾಗ ಗುಡ್ಡೆಕೇರಿ ಎಂಬ ಗ್ರಾಮದಿಂದ ಸುಮಾರು 9 ಕಿ.ಮೀ . ದೂರದಲ್ಲಿ ಕುಂದಾದ್ರಿ ಬೆಟ್ಟವಿದೆ.


ಬೆಟ್ಟ ತಲುಪಲು ಡಾಂಬರು ರಸ್ತೆ,ಹಾಗೂ ಕಾಲುದಾರಿಯೂ ಇದೆ.ಕುಂದಾದ್ರಿ ಬೆಟ್ಟ ಜೈನರ ಪವಿತ್ರ ಯಾತ್ರಾಸ್ಥಳ.ಬೆಟ್ಟದ ಮೇಲೆ ಪಾರ್ಶ್ವನಾಥ ಚೈತ್ಯಾಲಯವಿದೆ.ಚಾರಣಿಗರಿಗೆ ಚಾರಣ ಮಾಡಲು ಹೇಳಿ ಮಾಡಿಸಿದಂತಿದೆ ಈ ಕುಂದಾದ್ರಿ ಬೆಟ್ಟ.

ಬೆಟ್ಟದ ಮೇಲಿಂದ ಕಾಣುವ ಪ್ರಕೃತಿ ಸೌಂದರ್ಯ ಕಣ್ಣಿಗೆ ಹಬ್ಬವಾಗುತ್ತದೆ.ಎಲ್ಲಿ ನೋಡಿದರಲ್ಲಿ ದಟ್ಟ ಕಾಡು ,ತೋಟಗಳು,ಹೊಲಗದ್ದೆಗಳು ಆ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲುವುದಿಲ್ಲಾ......




ಈ ಬೆಟ್ಟದ ತುಟ್ಟತುದಿಯಲ್ಲಿ,ಒಂದು ಸುಂದರವಾದ ಪುಷ್ಕರಿಣಿಯೂ ನಮ್ಮ ಗಮನವನ್ನು ತನ್ನಕಡೆ ಸೆಳೆಯುತ್ತದೆ.ಇಲ್ಲಿ ಯಾವಾಗಲೂ ನೀರು ಇರುತ್ತದೆ ,ಎಂದು ಹೇಳುತ್ತಾರೆ.[ಆದರೇ ,ಪ್ರವಾಸಿಗರು ಪ್ರಕೃತಿಯು ನೀಡಿದ ಸ್ವಚ್ಛ ನೀರಿನ ಈ ಪುಷ್ಕರಿಣಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು,ಪ್ಲಾಸ್ಟಿಕ್ ಕವರ್ ,ಹಾಗೂ ಇನ್ನೂ ಅನೇಕ ಪ್ರಕೃತಿಯಲ್ಲಿ ಲೀನವಾಗದೇ ಇರುವಂತಹ ,ವಸ್ತುಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ.ಮನುಷ್ಯನ ಈ ಕೆಟ್ಟ ಸ್ವಭಾವಕ್ಕೆ ಪ್ರಕೃತಿ ತಿರುಗೇಟು ನೀಡುವ ಕಾಲ ದೂರದಲ್ಲಿಲ್ಲಾ........]


ಈ ಕುಂದಾದ್ರಿ ಬೆಟ್ಟದಲ್ಲಿ ಕುಂದಕುಂದ ಸ್ವಾಮಿಗಳು ತಪಸ್ಸು ಮಾಡಿದರೆಂಬ ಪ್ರತೀತಿ ಇದೆ.ಈ ಹಿನ್ನಲೆಯಲ್ಲಿ ''ಕುಂದಾದ್ರಿ''ಎಂಬ ಹೆಸರು ಬಂತು ಎನ್ನಲಾಗುತ್ತದೆ.

ಕನ್ನಡದಲ್ಲಿ ಕುಂದಾದ್ರಿ ಎಂಬ ಪದಕ್ಕೆ ''ಎತ್ತರವಾದ ಗೋಡೆ''ಎಂಬ ಅರ್ಥವೂ ಇದೆ .ಇದು ಕುಂದದ ರೀತಿ ಇರುವುದರಿಂದ ಇದಕ್ಕೆ ''ಕುಂದಾದ್ರಿ''ಎಂದು ಜನಬಳಕೆಯಲ್ಲಿ ಹೆಸರು ಬಂದಿರಬಹುದೆಂದು ಹೇಳಲಾಗುತ್ತದೆ.


ಕುಂದಾದ್ರಿಯ ತುದಿಯಲ್ಲಿ ಒಂದು ದೇವಾಲಯ ಮತ್ತು ನೀರಿನ ಅನುಕೂಲವಿದ್ದರೂ ಪ್ರವಾಸಿಗರಿಗೆ ತಂಗಲು ಸರಿಯಾದ ವ್ಯವಸ್ಥೆ ಇಲ್ಲ..ಚಾರಣಿಗರು ಕ್ಯಾಂಪ್  ಮಾಡಬಹುದು.ಪ್ರವಾಸಿಗರು ಸಮೀಪದ ತೀರ್ಥಹಳ್ಳಿ ಅಥವಾ ಆಗುಂಬೆಯಲ್ಲಿ ತಂಗಬಹುದು.


ಮತ್ತೊಂದು ವಿಷಯ ,ಕುಂದಾದ್ರಿ ಬೆಟ್ಟಕ್ಕೆ ಭೇಟಿ ನೀಡುವವರು ,ಊಟ ಮತ್ತು ನೀರಿನ ವ್ಯವಸ್ಥೆ ಮಾಡಿಕೊಂಡು ಬಂದರೆ ಉತ್ತಮ.ಹಾಗಾದರೆ,ಈ ವೀಕೆಂಡ್ನಲ್ಲಿ ನಿಮ್ಮ ಪಯಣ ........ಕುಂದಾದ್ರಿ ಬೆಟ್ಟಕ್ಕೆ......